ದಿಭ್ರೂಗಢ
ಆಸ್ಸಾಮ್ ರಾಜ್ಯದ ಲಖಿಮ್‍ಪುರ ಜಿಲ್ಲೆಯ ಒಂದು ಪಟ್ಟಣ. ಷಿಲಾಂಗ್ ನಗರದ ಈಶಾನ್ಯಕ್ಕೆ 368 ಕಿಮೀ. ದೂರದಲ್ಲಿ, ಬ್ರಹ್ಮಪುತ್ರಾ ನದಿಯ ದಂಡೆಯಲ್ಲಿ, ಉ.ಅ. 270 29' ಮತ್ತು ಪೂ.ರೇ. 940 55' ಮೇಲೆ ಇದೆ. ಬ್ರಹ್ಮಪುತ್ರಾ ನದಿಯನ್ನು ದಿಬ್ರೂ ನದಿ ಕೂಡುವ ಬಳಿ ಇರುವುದರಿಂದ ಇದಕ್ಕೆ ದಿಬ್ರೂಗಢ ಎಂದು ಹೆಸರು ಬಂದಿದೆ. ಒಂದು ಬದಿಗೆ ನದಿಯೂ ಉಳಿದ ಮೂರು ಬದಿಗಳಲ್ಲಿ ಗುಡ್ಡಬೆಟ್ಟಗಳೂ ಇರುವ ಈ ಪಟ್ಟಣದಲ್ಲಿ ವರ್ಷಕ್ಕೆ 950” - 112" ಮಳೆಯಾಗುತ್ತದೆ. ಆಸ್ಸಾಮಿನ ತಪ್ಪಲು ಪ್ರದೇಶದಲ್ಲಿರುವ ದಿಬ್ರೂಗಢ ನಿಸರ್ಗ ರಮಣೀಯ ಸ್ಥಳ. ಹಾಗೆಯೇ ಆಯಕಟ್ಟಿನ ಸ್ಥಳ ಕೂಡ. ಇಲ್ಲೊಂದು ಸೈನಿಕ ಠಾಣೆಯಿದೆ. 1950ರಲ್ಲಿ ಸಂಭವಿಸಿದ ಭೂಕಂಪದಲ್ಲಿ ಈ ಪಟ್ಟಣ ಹಾನಿಗೆ ಈಡಾಗಿತ್ತು. ಚಹ ತೋಟಗಳ ಆದಾಯದ ಆಕರ್ಷಣೆಯಿಂದಾಗಿ ಇದು ಮತ್ತೆ ಹೊಸ ಪಟ್ಟಣವಾಗಿ ರೂಪುಗೊಂಡಿತು. ಇದರ ಸುತ್ತ ಚಹ, ಅಕ್ಕಿ, ಕಬ್ಬು, ಸೆಣಬು ಬೆಳೆಯುತ್ತವೆ. ಕಲ್ಲಿದ್ದಲು ಗಣಿಗಳೂ ಎಣ್ಣೆಯ ಬಾವಿಗಳೂ ಉಂಟು. ಇಲ್ಲಿಯ ಎಂಡಿ ಮತ್ತು ಮೂಗಾ ರೇಷ್ಮೆ ಪ್ರಸಿದ್ಧವಾದ್ದು. ಎಣ್ಣೆ ತೆಗೆಯುವುದು, ಬಿದಿರಿನ ಸರಕು ಮತ್ತು ಬೆತ್ತದ ಸಾಮಾನುಗಳ ತಯಾರಿಕೆ - ಇವು ಇಲ್ಲಿಯ ಇತರ ಕಸಬುಗಳು. ಇದೊಂದು ವಾಣಿಜ್ಯ ಕೇಂದ್ರ. ಕಲ್ಕತ್ತದಿಂದ ದಿಬ್ರೂಗಢದವರೆಗೆ ವರ್ಷದುದ್ದಕ್ಕೂ ಜಲಯಾನ ಸೌಲಭ್ಯವುಂಟು. ಅಸ್ಸಾಮ್-ಬಂಗಾಲಗಳನ್ನು ಕೂಡಿಸುವ ರೈಲುಮಾರ್ಗ ದಿಬ್ರೂಗಢದ ಮೂಲಕ ಸಾದಿಯಾಗೆ ಹೋಗುತ್ತದೆ. ಬ್ರಹ್ಮಪುತ್ರಾ ಮತ್ತು ದಿಬ್ರೂ ನದಿಗಳ ಮೂಲಕ ಚಹ ಮತ್ತು ಇತರ ಸರಕುಗಳ ಸಾಗಣೆ ನಡೆಯುತ್ತದೆ. ಬಿಹಾರ, ಬಂಗಾಲಗಳಿಂದ ಬಂದು ಇಲ್ಲಿಯ ಚಹ ತೋಟಗಳಲ್ಲಿ ದುಡಿಯುವ ಜನರು ಹಲವು ಭಾಷೆ-ಉಪಭಾಷೆಗಳನ್ನಾಡುವವರು. ಹಲವು ಗುಡ್ಡಗಾಡು ಜನರೂ ಇಲ್ಲಿ ವಾಸಿಸುತ್ತಾರೆ. ಇಲ್ಲಿಯ ಜನ ಸಾಮಾನ್ಯವಾಗಿ ದೃಢಕಾಯರು. ಇಲ್ಲಿ ಹಳೆಯ ಕೋಟೆಯೊಂದಿದೆ. ಈ ಪಟ್ಟಣದ ಆಡಳಿತಕ್ಕೆ ಒಂದು ಪುರಸಭೆ ಇದೆ. ದಿಬ್ರೂಗಢದಲ್ಲಿ ಕಲೆ, ವಿe್ಞÁನ, ವಾಣಿಜ್ಯ ಮತ್ತು ವೈದ್ಯಕೀಯ ಕಾಲೇಜುಗಳಿವೆ.
(ಬಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ